Skip to main content

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ




ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ.
ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು.
ಮಡಿಕೆಗೆ ಆಧುನಿಕ ಟಚ್:
ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋಗ್ಯದ ವಿಷಯದಲ್ಲೂ ಪ್ಲಸ್ ಎನಿಸಿರುವ ಮಡಿಕೆ-ಕುಡಿಕೆಗಳು ಹೆಂಗಳೆಯರ ಮನಗೆದ್ದಿವೆ.
ಬೇಡಿಕೆ ಇದ್ದರೂ, ಪೂರೈಕೆ ಕಷ್ಟ:
ಬೇಡಿಕೆ ಇದ್ದರೂ, ಲಾಭದಾಯಕವಾಗಿದ್ದರೂ ಈ ಉದ್ಯಮ ನಿರ್ವಹಿಸುವುದು ಕಷ್ಟ ಅನ್ನುತ್ತಾರೆ ಗಣೇಶ್. ಹಳೆಪೇಟೆಯ ಹಲವು ಕುಂಬಾರರಂತೆ ಇವರ ಜೀವನ ಸಾಗುತ್ತಿರುವುದೂ ಇದೇ ವೃತ್ತಿಯಿಂದ ಗಣೇಶ್ ಹೇಳುವಂತೆ ತಯಾರಿಕೆಯ ಹಿಂದಿರುವ ಶ್ರಮವನ್ನು ಪರಿಗಣಿಸಿದರೆ ಕುಂಬಾರಿಕೆ ಕೊಂಚ ಕಷ್ಟದ ವೃತ್ತಿಯೇ ಸರಿ.
ಮಡಿಕೆ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಕೆಯಾಗುವುದು ಆವೆಮಣ್ಣು. ಆದರೆ ಎಲ್ಲೆಡೆಯೂ ಇದು ಲಭ್ಯವಿಲ್ಲದೇ ಇರುವುದರಿಂದ ದೂರದೂರುಗಳಿಂದ ಬರುವ ಒಂದು ಲೋಡ್ ಮಣ್ಣಿಗೆ ೩೦ ರಿಂದ ೩೫ ಸಾವಿರ ರೂ ತೆರಬೇಕಾಗುತ್ತದೆ. ಇದರಿಂದ ಸುಮಾರು ೨,೫೦೦ರಷ್ಟು ಮಡಿಕೆಗಳನ್ನು ತಯಾರಿಸಬಹುದು ಅನ್ನುತ್ತಾರೆ ಗಣೇಶ್.
ತಯಾರಿಗೆ ಬೇಕು ಅಧಿಕ ಪರಿಶ್ರಮ:
ಮಡಿಕೆ ತಯಾರಿಯ ಹಿಂದಿರುವ ಶ್ರಮವನ್ನು ಪರಿಗಣಿಸಿಯೇ ’ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ಗಾದೆ ಮಾತು ಹುಟ್ಟಿಕೊಂಡಿರಬೇಕು. ಈ ಪ್ರಕ್ರಿಯೆ ಅಷ್ಟು ಸಂಕೀರ್ಣ. ತಯಾರಿಯ ಪ್ರಥಮ ಹಂತವಾಗಿ ಮೊದಲು ಆವೆಮಣ್ಣನ್ನು ಪುಡಿಮಾಡಿ ಸುಡಲಾಗುತ್ತದೆ. ನಂತರ ನೀರುಹಾಕಿ ಕಾಲಿನಿಂದ ತುಳಿದು ಹದಮಾಡಿ ಎರಡು ದಿನಗಳ ಕಾಲ ಹದಬರಲು (ಹುಳಿ ಬರಲು) ಬಿಡಲಾಗುತ್ತದೆ. ನಂತರ ಬೇಕಾದಷ್ಟು ಮಣ್ಣನ್ನು ಚಕ್ರದ ಮೇಲಿರಿಸಿ ವಿವಿಧ ಆಕಾರ, ಗಾತ್ರದ ಮಡಿಕೆ-ಕುಡಿಕೆಗಳನ್ನು ತಯಾರಿಸಲಾಗುತ್ತದೆ. ಹೀಗೆ ಸಿದ್ಧವಾದ ಮಡಿಕೆಯನ್ನು ಒಲೆಯಲ್ಲಿ ಬೇಯಿಸಿ, ಗಟ್ಟಿಮಾಡಿ ಒಣಗಿಸಿ, ಮಾಲೀಷ್ ಮಾಡಿದರೆ ಮಣ್ಣಿನ ಮಡಿಕೆ ರೆಡಿ.
ವೃತ್ತಿಯಾಗಿ ಕುಂಬಾರಿಕೆ:
ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆಗಳಲ್ಲಿ ಇಂದಿಗೂ ಕುಂಬಾರಿಕೆ ವೃತ್ತಿಯಾಗಿ ಮುಂದುವರೆದಿದೆ. ಕುಟುಂಬದಿಂದ ಬಳುವಳಿಯಾಗಿ ಬಂದ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಕಲಾತ್ಮಕ ಸೃಷ್ಟಿಯಾಗಿಯೂ ಕುಂಬಾರಿಕೆ ಆಕರ್ಷಣೆ ಪಡೆದಿದೆ. ಹಿಂದೆಲ್ಲಾ ಮಡಿಕೆ ತಯಾರಿ ನಂತರ ಅವುಗಳನ್ನು ಹೊತ್ತು ಊರೂರು ಸುತ್ತಿ ವ್ಯಾಪಾರ ಮಾಡುವ ಪ್ರವೃತ್ತಿಯಿತ್ತು, ಸಿದ್ಧ ಉತ್ಪನ್ನದ ಮಾರಾಟಕ್ಕೆ ಸೂಕ್ತ ವೇದಿಕೆ ಇಲ್ಲದೇ ಇರುವುದು ಈ ಉದ್ಯಮದಿಂದ ಯುವಕರು ವಿಮುಖರಾಗುತ್ತಿರುವುದಕ್ಕೆ ಪ್ರಮುಖ ಕಾರಣವಾಗಿತ್ತು. ಆದರೆ ಇಂದು ತಾಪಮಾನ ಏರಿದಂತೆಲ್ಲಾ ಆರೋಗ್ಯದ ದೃಷ್ಠಿಕೋನದಿಂದ ಹೆಚ್ಚಿನವರು ಮಡಿಕೆಯ ಮೊರೆ ಹೋಗುತ್ತಿದ್ದಾರೆ. ಮಡಿಕೆ ತಯಾರಕರಿಗೆ ಬೇಸಿಗೆ ಕಾಲ ಸುಗ್ಗಿಯೇ ಸರಿ. ಕುಂಬಾರರ ಶ್ರಮಕ್ಕೆ ತಕ್ಕಂತೆ ಸೂಕ್ತ ಬೆಲೆಗೆ ಮಡಿಕೆಗಳು ಮಾರಾಟವಾದಲ್ಲಿ ಕುಂಬಾರರ ಜೀವನ ಸುಗಮವಾಗಿ ಸಾಗುವುದರೊಂದಿಗೆ ಸಾಂಪ್ರದಾಯಿಕ ವೃತ್ತಿಯೊಂದನ್ನು ಜೀವಂತವಾಗಿ ಉಳಿಸಿದಂತಾಗುತ್ತದೆ.
ಬರಹ: ಶ್ರುತಿ ಜೈನ್ ರೆಂಜಾಳ
ಚಿತ್ರ: ಕೃಷ್ಣಪ್ರಶಾಂತ್ ವಿ. ಗೇರುಕಟ್ಟೆ





Comments

Popular posts from this blog

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

Gems -write up

ಕಾಡುವ GEMSನ ನೆನಪು ಜೆಮ್ಸ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಲ್ಯದಲ್ಲಿ ನನಗಿಷ್ಟವಾಗಿದ್ದ ಚಾಕಲೇಟ್ ಅಂದರೆ ಅದು ಜೆಮ್ಸ್. ಅಮ್ಮ, ಅಪ್ಪ ಪೇಟೆಗೆ ಹೋಗುತ್ತಿದ್ದಾಗ, ನೆಂಟರಿಷ್ಟರು ಮನೆಗೆ ಬರುತ್ತಿದ್ದಾಗ ತಪ್ಪದೇ ಎರಡು ಪಾಕೆಟ್ ಜೆಮ್ಸ್ ತರುತ್ತಿದ್ದರು. ದುಂಡಗಿದ್ದ ಅದನ್ನು ನಾವು “ಚಾಕಿ ಮಾತ್ರೆ” ಎಂದು ಕರೆಯುತ್ತಿದ್ದೆವು. ಬೇಸಿಗೆ ರಜೆಯಲ್ಲಿ ಸೋದರ ಸಂಬಂಧಿಗಳು ಬಂದಾಗ ಸೋದರ ಸೋದರಿಯರಿಗೆ ಸಮವಾಗಿ ಹಂಚುವ ಜವಾಬ್ದಾರಿ ಹಿರಿಯವಳಾದ ನನ್ನದಾಗಿತ್ತು. ನಾವು ಐದಾರು ಜನ 2 ಪಾಕೆಟನ್ನು ಹಂಚಿಕೊಳ್ಳಲು ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೆವು. ಬಣ್ಣದ ಅನುಗುಣವಾಗಿ ಸಮಪಾಲು ಮಾಡುತ್ತಿದ್ದೆವು. ಗಣಿತ ಮೇಷ್ಟ್ರು ಬಹುಶಃ ನನಗೆ ಬೇಸಿಕ್ ಗಣಿತ ಹೇಳಿಕೊಟ್ಟ ಕೀರ್ತಿ ಜೆಮ್ಸಿಗೆ ಸಲ್ಲುತ್ತದೆ, ನಾವು ಬಣ್ಣದ ಅನುಗುಣವಾಗಿ ಜೆಮ್ಸ್ ಹಂಚುತ್ತಿದ್ದರೂ, ಕಿರಿಯರಿಗೆ ನಮ್ಮ ಪಾಲಿಂದ ತಲಾ ಒಂದು ಜೆಮ್ಸ್ ನೀಡಬೇಕಿತ್ತು. ಹೀಗಾಗಿ ಲೆಕ್ಕಾಚಾರದಲ್ಲಿ ಎಂದೂ ತಪ್ಪಾಗದಂತೆ ನೋಡಿಕೊಳ್ಳುವ ಪಾಳಿ ನನ್ನದಾಗಿತ್ತು. ಸಾಲದೆಂಬಂತೆ ಪೋಷಕರು ಬಂದಾಗ ಒಂದೋ ಎರಡೋ ಜೆಮ್ಸ್‍ನ್ನು ನಮ್ಮ ಪಾಲಿಂದ ತೆಗೆದುಕೊಳ್ಳುತ್ತಿದ್ದರು. ಹೀಗಿರುವಾಗ ದೊಡ್ಡವಳಾದ ನನಗೆ ಸಿಗುತ್ತಿದ್ದ ಜೆಮ್ಸ್ 2-3 ಅಷ್ಟೇ. ದುಂಡಗಿದ್ದ ಜೆಮ್ಸನ್ನು ಚೀಪುತಿದ್ದ ನಾವು, ಒಳಗಿನ ಚಾಕಲೇಟ್ ಸಿಗುವವರೆಗೆ ನಾಲಗೆಗೆ ಕೆಲಸ ಕೊಡುತ್ತಿದ್ದೆವು. ಹೊರಗಿನ ಬಣ್ಣ ಕರಗಿದ ನಂತರ ಚಾಕಲೇಟ್‍ನ್ನು ಹೊರತೆಗೆದು ಕ...