Skip to main content

Antharangadalli Aksharadhama

ಅಂತರಂಗದಲಿ ಅಕ್ಷರಧಾಮ

ದೇಗುಲದ ಹೊರನೋಟ


ಎತ್ತ ನೋಡಿದರೂ ಕೆತ್ತನೆಗಳು... ಅದ್ಭುತ ಎನಿಸುವ ವಿನ್ಯಾಸ, ವಿಶ್ವಕರ್ಮನೇ ಧರೆಗಿಳಿದು ಬಂದು ಸೃಷ್ಟಿಸಿದಂತೆ ಭಾಸವಾಗುವ ವೈಭವದ ಆವರಣ.... ಇದೆಲ್ಲಾ ಕಾಣಸಿಗುವುದು ಆಧ್ಯಾತ್ಮಿಕ-ಸಾಂಸ್ಕೃತಿಕ ತಾಣವೆಂದು ಪ್ರಸಿದ್ಧಿ ಪಡೆದಿರುವ ಶಿಲ್ಪಕಲೆಗೆ ದ್ಯೋತಕದಂತಿರುವ ನವದೆಹಲಿಯ ಅಕ್ಷರಧಾಮ ದೇವಾಲಯದಲ್ಲಿ. ದೆಹಲಿಯ ಶೇ.೭೦ರಷ್ಟು ಪ್ರವಾಸಿಗರನ್ನು ಆಕರ್ಷಿಸುವ ಈ ಭವ್ಯವಾದ ದೇಗುಲದ ನಿರ್ಮಾತೃ ಸ್ವಾಮಿ ಮಹಾರಾಜ್. ಆಚಾರ್ಯ ಸ್ವಾಮಿ ನಾರಾಯಣರಿಗೆ ಈ ದೇವಾಲಯವನ್ನು ಅರ್ಪಣೆ ಮಾಡಲಾಗಿದೆ. ೨೦೦೫ ನವೆಂಬರ್ ೬ರಂದು ಡಾ|ಎ.ಪಿ.ಜೆ ಅಬ್ದುಲ್ ಕಲಾಂ ಅಕ್ಷರಧಾಮವನ್ನು ಉದ್ಘಾಟಿಸಿ ಭಾರತಕ್ಕೆ ಅರ್ಪಿಸಿದರು.
ಅಭಿಷೇಕ ಮಂಟಪ,  ಆಕರ್ಷಕ ಉದ್ಯಾನವನ, ಸಹಜಾನಂದ ದರ್ಶನ (ಮೌಲ್ಯಗಳ ದರ್ಶನ), ನೀಲಕಂಠ ದರ್ಶನ(ಸ್ವಾಮಿ ನಾರಾಯಣರ ಯೌವ್ವನದ ಕಾಲಾವಧಿಯ ಅನಾವರಣ) ಸಂಸ್ಕೃತಿ ದರ್ಶನ( ಸಾಂಸ್ಕೃತಿಕ ದೋಣಿ ವಿಹಾರ) ಎಂಬ ಮೂರು ವಿಭಿನ್ನ ಪ್ರದರ್ಶನಗಳು ಅಕ್ಷರಧಾಮದ ಪ್ರಮುಖ ಆಕರ್ಷಣೆ.  ಸ್ವಾಮಿನಾರಾಯಣರ ಧರ್ಮಚಿಂತನೆಯ ಪ್ರಕಾರ ಅಕ್ಷರಧಾಮವೆಂದರೆ ದೇವರು ವಾಸಿಸುವ ಸ್ಥಳ ಹಾಗು ಭೂಮಿಯ ಮೇಲೆ ಪರಮಾತ್ಮ ಇರಲು ಇರುವ ತಾಣ ಎಂದು ಭಕ್ತಾದಿಗಳು ನಂಬಿದ್ದಾರೆ.

ಅಕ್ಷರಧಾಮ ಮಂದಿರ

ಅಕ್ಷರಧಾಮ ದೇಗುಲದ ಪ್ರಮುಖ ಆಕರ್ಷಣೆಯೆಂದರೆ ಅಕ್ಷರಧಾಮ ಮಂದಿರ. ಸುಮಾರು ೪೩ ಮೀ ಎತ್ತರ, ೯೬ ಮೀ ಅಗಲ, ೧೦೯ ಮೀ ಉದ್ದವಿರುವ ಅಕ್ಷರಧಾಮ ಮಂದಿರವು ವಿವಿಧ ಸಸ್ಯಸಂಕುಲ, ವನ್ಯಜೀವಿ ಸಂಕುಲ, ನೃತ್ಯಕನ್ನಿಕೆಯರು, ಗಾಯಕರು ಹಾಗೂ ವಿವಿಧ ಆರಾಧಕರ ಕೆತ್ತನೆಗಳನ್ನು ಹೊಂದಿದೆ. ಮಹರ್ಷಿ ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣಗೊಂಡಿರುವ ಮಂದಿರವು, ಭಾರತದ ವಿವಿಧ ವಾಸ್ತು ಶೈಲಿಗಳ ಮಿಶ್ರಣವಾಗಿದೆ. ಮಂದಿರವನ್ನು ರಾಜಸ್ಥಾನದ ತಿಳಿಗೆಂಪು ಮರಳುಗಲ್ಲುಹಾಗೂ ಇಟಲಿಯ ಕೆರಾರಾ ಅಮೃತ ಶಿಲೆಯಿಂದ ನಿರ್ಮಿಸಲಾಗಿದೆ.


ಸುಂದರವಾದ ಕೆತ್ತನೆ ಹೊಂದಿದ ೨೩೪ ಸ್ಥಂಬಗಳು, ೯ ಗುಂಬಜ್‌ಗಳು, ಸಾಧುಗಳು, ಭಕ್ತಾದಿಗಳು ಹಾಗೂ ವಿವಿಧ ಆಚಾರ್ಯರ ಸುಮಾರು ೨೦೦೦೦ ಮೂರ್ತಿಗಳನ್ನು ಈ ಮಂದಿರವು ಒಳಗೊಂಡಿದೆ. ಮಂದಿರದ ಆವರಣದಲ್ಲಿ ಸುಮಾರು ೩೦೦೦ ಟನ್ ತೂಗುವ ೧೪೮ ಬೃಹತ್ ಗಾತ್ರದ ಆನೆಗಳನ್ನು ಕೆತ್ತಲಾಗಿದೆ. ದೇವಾಲಯದ ಮಧ್ಯದ ಗುಂಬಜದ ಕೆಳಗೆ ಸುಮಾರು ೩.೪ ಮೀ ಎತ್ತರದ, ಅಭಯಮುದ್ರೆಯಲ್ಲಿ ಕುಳ್ಳಿರಿಸಿದ ಆರಾಧ್ಯ ದೈವ ಸ್ವಾಮಿ ನಾರಾಯಣರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸ್ವಾಮಿ ನಾರಾಯಣರ ಮೂರ್ತಿಯ ಸುತ್ತಲೂ ಭಕ್ತಿ ಭಂಗಿಯಲ್ಲಿ ಇರುವ ಅವರ ಗುರುಗಳ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಅಕ್ಷರಧಾಮದಲ್ಲಿ ಪಂಚ ಧಾತುಗಳಿಂದ ತಯಾರಿಸಿದ ಸೀತಾ ರಾಮರ ಮೂರ್ತಿ, ರಾಧಾ ಕೃಷ್ಣರ ಮೂರ್ತಿ, ಶಿವ ಪಾರ್ವತಿಯರ ಮೂರ್ತಿ ಹಾಗೂ ಲಕ್ಷ್ಮೀ ನಾರಾಯಣರ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ.

ಪ್ರದರ್ಶನಗಳು


ಸಹಜಾನಂದ ದರ್ಶನ-ಮೌಲ್ಯಗಳ ದರ್ಶನ

ಸ್ವಾಮಿ ನಾರಾಯಣರ ಜೀವನದ ವಿವಿಧ ಘಟನೆಗಳನ್ನು ರೊಬೊಟಿಕ್ಸ್ ಹಾಗೂ ೩ಡಿ ತಂತ್ರಜ್ಞಾನದ ಮೂಲಕ ಪ್ರದರ್ಶಿಸಿ ಶಾಂತಿ, ಮಾನವೀಯತೆ, ಪ್ರಾರ್ಥನೆಯ ಮಹತ್ವ, ಮೌಲ್ಯ, ಸೌಹಾರ್ದತೆ, ಕಠಿಣ ಪರಿಶ್ರಮ ಮುಂತಾದ ಸಂದೇಶಗಳನ್ನು ಫೈಬರ್ ಆಪ್ಟಿಕ್ಸ್ , ಸಂಭಾಷಣೆ, ಧ್ವನಿ ವರ್ಧಕಗಳ ಸಹಾಯದಿಂದ ಸಾದರಪಡಿಸಲಾಗುತ್ತದೆ. ಘನಶ್ಯಾಮ ಮಹಾರಾಜನ ರೂಪದಲ್ಲಿರುವ ಜಗತ್ತಿನ ಅತ್ಯಂತ ಸಣ್ಣ ಆನಿಮಾಟ್ರಿಕ್ ರೊಬೊಟ್ ಇಲ್ಲಿನ ವಿಶೇಷತೆ.


ನೀಲಕಂಠ ದರ್ಶನ-ಸ್ವಾಮಿ ನಾರಾಯಣರ ಯೌವ್ವನದ ಕಾಲಾವಧಿಯ ಅನಾವರಣ
ಸುಮಾರು ೨೬*೨೦ಮೀ ದೊಡ್ಡದಾದ ಸ್ಕ್ರೀನ್ ಇರುವ ಚಿತ್ರಮಂದಿರದಲ್ಲಿ ಸ್ವಾಮಿ ನಾರಾಯಣರ ನೀಲಕಂಠ ಯಾತ್ರೆಯ ೪೦ ನಿಮಿಷದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಚಿತ್ರಮಂದಿರದ ಹೊರಗೆ ಸುಮಾರು ೮.೨ ಮೀ ಎತ್ತರದ ನೀಲಕಂಠ ವರ್ಣಿಯ  ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ಸಂಸ್ಕೃತಿ ವಿಹಾರ: ಸಾಂಸ್ಕೃತಿಕ ದೋಣಿ ವಿಹಾರಸುಮಾರು ೧೫ ನಿಮಿಷದ ದೋಣಿ ವಿಹಾರದಲ್ಲಿ ಭಾರತದ ಭವ್ಯ ಇತಿಹಾಸವನ್ನು, ಮಹಾಪುರುಷರನ್ನು ದೊಡ್ಡ ಗಾತ್ರದ ಪ್ರತಿಮೆಗಳು ಹಾಗೂ ರೊಬೊಟಿಕ್ಸ್ ತಂತ್ರಜ್ಞಾನದ ಮೂಲಕ ಪರಿಚಯಿಸಲಾಗಿದೆ.

ಸಂಗೀತ ಕಾರಂಜಿ
Musical Fountain

ಸಂಗೀತ ಕಾರಂಜಿಯು ಯಜ್ಞಪುರುಷ ಕುಂಡ ಎಂಬ ಹೆಸರನ್ನೂ ಹೊಂದಿದೆ. ಸುಮಾರು ೯೧*೯೧ಮೀ ವಿಸ್ತಾರವನ್ನು ಹೊಂದಿರುವ ಈ ಕಾರಂಜಿಯು ಯಜ್ಞಕುಂಡದಂತೆ ಇದ್ದು ೨೮೭೦ ಮೆಟ್ಟಿಲುಗಳು ಹಾಗೂ ೧೦೮ ಸಣ್ಣ ದೇವಮಂದಿರ ಗಳನ್ನು ಹೊಂದಿದೆ. ಸಂಗೀತ ಕಾರಂಜಿಯ ಮಧ್ಯಭಾಗವು ೮ ದಳಗಳುಳ್ಳ  ತಾವರೆಯ ವಿನ್ಯಾಸವನ್ನು ಹೊಂದಿದ್ದು ಪಂಚಶಾಸ್ತ್ರದ ಜಯಾಖ್ಯ ಸಂಹಿತೆಯ ಆಧಾರದ ಮೇಲೆ ಇದನ್ನು ನಿರ್ಮಿಸಲಾಗಿದೆ.

ಉದ್ಯಾನವನ

ಭಾರತದ ಉಪವನ ಎಂದೇ ಪ್ರಸಿದ್ಧವಾಗಿರುವ ಉದ್ಯಾನವನದಲ್ಲಿ ಚೆನ್ನಾಗಿ ಅಲಂಕೃತವಾದ ಹುಲ್ಲುಗಾವಲು, ಮರಗಳು, ಪೊದೆಗಳು ಉದ್ಯಾನವನಕ್ಕೆ ಮೆರುಗನ್ನು ತಂದುಕೊಟ್ಟಿದೆ. ರಾಷ್ಟ್ರೀಯ ನಾಯಕರು, ಸ್ವಾತಂತ್ರ ಹೋರಾಟಗಾರರ ಕಂಚಿನ ಪ್ರತಿಮೆಗಳನ್ನು ಉದ್ಯಾನವನದಲ್ಲಿ ಸಾಲಾಗಿ ಇಡಲಾಗಿದೆ.

ಯೋಗಿ ಹೃದಯ ಕಮಲ



ಯೋಗಿ ಹೃದಯ ಕಮಲವು ತಾವರೆಯ ಆಕಾರದ ಉದ್ಯಾನವನವಾಗಿದ್ದು ಇಲ್ಲಿ ಶೇಕ್ಸ್‌ಪಿಯರ್‌ನಿಂದ ಸ್ವಾಮಿ ನಾರಾಯಣರವರೆಗೆ ಹಲವಾರು ಮಹಾನ್ ವ್ಯಕ್ತಿಗಳ ನುಡಿಮುತ್ತುಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.

ನೀಲಕಂಠ ಅಭಿಷೇಕನೀಲಕಂಠ ವರ್ಣಿಯ ಪ್ರತಿಮೆಗೆ ಭಕ್ತಾದಿಗಳು ನೀರಿನ ಅಭಿಷೇಕವನ್ನು ಮಾಡಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆಗೈಯ್ಯುತ್ತಾರೆ.

ನಾರಾಯಣ ಸರೋವರನಾರಾಯಣ ಸರೋವರವು ಸುಮಾರು ೧೫೧ ಪವಿತ್ರ ನದಿಗಳ ನೀರನ್ನು ಹೊಂದಿದೆ. ಜನಮಂಗಳ ನಾಮಾವಳಿಯನ್ನು ಹೊಂದಿದ ೧೦೮ ಗೋಮುಖಗಳನ್ನು ಹೊಂದಿದೆ.

ಗಿನ್ನಿಸ್ ರೆಕಾರ್ಡ್
೧೭ ಡಿಸೆಂಬರ್ ೨೦೦೭ ರಂದು ಗಿನ್ನಿಸ್ ಸಂಸ್ಥೆಯ ರಾಯಭಾರಿ ಮೈಕೆಲ್ ವಿಟ್ಟಿ ಅಕ್ಷರಧಾಮವನ್ನು "World's largest comprehensive temple" ಎಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲಿಸಿದರು. ಸುಮಾರು ೧೦೯ ಮೀ ಉದ್ದ, ೯೬ ಮೀ ಅಗಲ, ೪೩ ಮೀ ಎತ್ತರ ಹೊಂದಿರುವ ಅಕ್ಷರಧಾಮವು ಸುಮಾರು ೮೬,೩೪೨ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
ಇಂತಹ ಭವ್ಯವಾದ ದೇಗುಲಕ್ಕೆ ನೀವೂ ಹೋಗಿ ಬನ್ನಿ.......

ಪ್ರಜ್ಞಾ ಹೆಬ್ಬಾರ್
ದ್ವಿತೀಯ ಪತ್ರಿಕೋದ್ಯಮ
ಎಸ್‌ಡಿಎಂ ಕಾಲೇಜು ಉಜಿರೆ
ಚಿತ್ರಕೃಪೆ : ಅಕ್ಷರಧಾಮ ವೆಬ್‌ಸೈಟ್
ದೂರವಾಣಿ: - 9008897064

Comments

Popular posts from this blog

Mannina Madike

ಮಣ್ಣಿನ ಮಡಿಕೆಗೆ ಮಾರುಹೋದ ಜನತೆ ಪ್ರಕೃತಿಯನ್ನು ಧಿಕ್ಕರಿಸಿ ನಡೆದ ಮನುಷ್ಯ ಇದೀಗ ಆರೋಗ್ಯದ ಕಾರಣಕ್ಕೆ ಮರಳಿ ಮಣ್ಣಿನೆಡೆಗೆ ಹೊರಳುತ್ತಿದ್ದಾನೆ. ಇದೇ ಕಾರಣಕ್ಕೆ ಟ್ರೆಂಡ್ ಹೆಸರಲ್ಲಿ ಅಡುಗೆ ಮನೆಯಿಂದ ಹೊರ ಹಾಕಿದ್ದ ಮಣ್ಣಿನ ಪಾತ್ರೆಗಳನ್ನು ಮರಳಿ ಮನೆಗೆ ತಂದಿದ್ದಾನೆ. ಒಂದು ಕಾಲದಲ್ಲಿ ಕೇವಲ ಅಡುಗೆ ಮನೆಯ ಪಾರುಪತ್ಯ ವಹಿಸಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಅಡುಗೆ ಮನೆಯ ಗಡಿ ದಾಟಿವೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆಯಲ್ಲಿರುವ ಮನೆಗಳ ಆವರಣ ಹೊಕ್ಕರೆ ಮಡಿಕೆಗಳ ರೂಪಾಂತರಕ್ಕೆ ಸಾಕ್ಷಿ ಸಿಗುತ್ತವೆ. ಹಳೆಪೇಟೆಯಲ್ಲಿ ಸುಮಾರು ೪೦ ರಷ್ಟು ಮನೆಗಳಲ್ಲಿ ಕುಂಬಾರಿಕೆ ಇಂದಿಗೂ ಜೀವಂತ. ಕುಟುಂಬದಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಹಳೆಪೇಟೆಯ ಕುಂಬಾರರು. ಇಂದಿನ ಸ್ಟೀಲ್, ಫೈಬರ್, ಪ್ಲಾಸ್ಟಿಕ್ ಜಮಾನದಲ್ಲಿ ಮಣ್ಣಿನ ಕುಡಿಕೆಗಳನ್ನು ಯಾರು ಕೊಳ್ಳುತ್ತಾರೆ? ಅನ್ನುವ ಭಾವ ನಿಮ್ಮಲ್ಲಿದ್ದರೆ ಅದನ್ನು ಬದಲಾಯಿಸಿಕೊಳ್ಳಿ ಅನ್ನುತ್ತಾರೆ ಇಲ್ಲಿನ ಕುಂಬಾರರು. ಮಡಿಕೆಗೆ ಆಧುನಿಕ ಟಚ್: ಮಡಿಕೆಗಳು ಆಧುನಿಕ ಮನೋಭಾವಕ್ಕೆ ತಕ್ಕಂತೆ ಮಾಡರ್ನ್ ಲುಕ್ ಹೊತ್ತುಕೊಂಡು ಹೆಂಗಳೆಯರ ಮನ ಸೆಳೆಯುತ್ತಿವೆ. ಹೂಜಿ, ಹೂದಾನಿ, ದೀಪ, ಹೂಕುಂಡ, ಧೂಪದ ಭರಣಿ ಹೀಗೆ ಹತ್ತು-ಹಲವು ರೂಪಗಳಲ್ಲಿ ಬಳಕೆಗೆ ಲಭ್ಯವಿವೆ. ಈ ಮಣ್ಣಿನ ಸಾಮಗ್ರಿಗಳನ್ನು ಸಂಭಾಳಿಸುವುದು ಕೊಂಚ ಕಷ್ಟ ಅನ್ನುವುದು ಬಿಟ್ಟರೆ, ಆರೋ...

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ!

ನಾ ಕೂಗ್ತಾ ಇಲ್ಲ, ಅಳ್ತಾ ಇದ್ದೇನೆ! "HOME AWAY FROM HOME" ಎಂಬ ಮಾತಿನಂತೆ ಹಾಸ್ಟೆಲ್ ಎಂಬುದು ಮತ್ತೊಂದು ಮನೆ ಇದ್ದಂತೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ವಾಸವನ್ನು ಮಾಡಲೇಬೇಕು. ಮನೆಬಿಟ್ಟು ಬಂದ ಹೊಸದರಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುವುದು ಸುಲಭದ ಮಾತ್ರವಲ್ಲ. ಹಾಸ್ಟೆಲ್‌ನ ತಿಂಡಿ ತಿನ್ನುವಾಗ ಅಮ್ಮನ ಕೈರುಚಿ ನೆನಪಾಗುವುದು ಸಹಜ. ಇನ್ನು ಸಾಕು ಪ್ರಾಣಿಗಳನ್ನು ಹಚ್ಚಿಕೊಂಡವರಿಗೆ ಅದನ್ನು ಬಿಟ್ಟಿರುವುದು ತುಸು ಕಷ್ಟದ ವಿಚಾರ. ಅನೇಕ ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ ಬದುಕು ಕಲಿಸುವ ಹಾಸ್ಟೆಲ್. ಎಂದಿನಂತೆ ಅಂದು ನಾನು ಊಟ ಮುಗಿಸಿ ರೂಮಿಗೆ ವಾಪಸ್ಸಾಗುತ್ತಿದ್ದೆ. ಅಷ್ಟರಲ್ಲಿ ಗೆಳತಿ ಭೂಮಿಕಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವಳನ್ನು ಸುತ್ತುವರಿದ ರೂಂಮೇಟ್ಸ್‌ಗಳು ಸಮಾಧಾನ ಮಾಡುತ್ತಿದ್ದರು. ಕಾರಣವೇನೆಂದು ಕೇಳಿದಾಗ, ಅವಳ ಅಚ್ಚುಮೆಚ್ಚಿನ ನಾಯಿ ಸತ್ತುಹೋಗಿದೆ ಎಂದು ತಿಳಿಯಿತು. ಅಳುತ್ತಾ ಇದ್ದ ಅವಳನ್ನು ನೋಡಿ ನಾನು, ನೀನು ಕೂಗಬೇಡ. ಸಮಾಧಾನ ಮಾಡಿಕೋ. ಬೇರೊಂದು ನಾಯಿಯನ್ನು ತರೋಣ ಎಂದು ಸಾಂತ್ವನ ಹೇಳಿದೆ. ನನ್ನ ಮಾತನ್ನು ಆಲಿಸಿದ ಅವಳು ಅಳುವುದನ್ನು ನಿಲ್ಲಿಸಿ ಸಿಡಿಮಿಡಿಗೊಂಡಳು. ನಿಂಗೆ ಕಣ್ ಕಾಣಿಸ್ತಿಲ್ವ. ನಾನೆಲ್ಲಿ ಕೂಗ್ತಾ ಇದೀನಿ? ನಾನಿಲ್ಲಿ ಅಳ್ತಾ ಇದೀನಿ ಎಂದು ಕೋಪದಿಂದ ಹೇಳಿದಳು. ಇದನ್ನು ನೋಡಿ ನಾನು ಕಕ್ಕಾಬಿಕ್ಕಿಯಾದೆ. ಸಮಾಧಾನದ ಮಾತುಗಳನ್ನಾಡಿದ ನನಗೆ ಯಾಕೆ ತಿರುಗಿ ಬೈ...

BOQUE PREPARATION- EASY STEPS

ಹೂವಿನ ಮೇಲೆ ಸ್ತ್ರೀಯರ ಒಲವ್! ಹೂವೇ.. ಹೂವೇ ನಿನ್ನೀ ನಗುವಿಗೆ ಕಾರಣವೇನೇ?  ಹೂವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?!  ಅದು ನಗುತ್ತಾ ನಮ್ಮ ಮೊಗದಲ್ಲೂ ಮಂದಹಾಸವನ್ನು ಸೃಷ್ಟಿಸುತ್ತದೆ. ಪ್ರೇಮ ನಿವೇದನೆಯಿಂದ ಹಿಡಿದು ಅಂತಿಮ ನಮನದ  ಸಂದರ್ಭಗಳಲ್ಲಿ  ಬಳಕೆಯಾಗುತ್ತದೆ. ನಮ್ಮ ಸುತ್ತಮುತ್ತಲು ಕಾಣಸಿಗುವ ಹೂವುಗಳು ಹಾಗೂ ಎಲೆಗಳನ್ನು ಬಳಸಿಕೊಂಡು ಆಕರ್ಷಕ ಹೂಗುಚ್ಚವನ್ನು ತಯಾರಿಸಿ, ಅದರಿಂದ ಹಣ ಸಂಪಾದಿಸಬಹುದು!! ಅದು ಹೇಗೆ ಅಂತೀರಾ?  ಹೂಗುಚ್ಛ ತಯಾರಿ ಹೇಗೆ? ಗುಲಾಬಿ, ಮಲ್ಲಿಗೆ, ಸೇವಂತಿಗೆ, ಗ್ಲಾಡಿಯೋಲಸ್, ನೀಲಿ, ಬಿಳಿ ಹಾಗೂ ಹಳದಿ ಡೈಸಿ, ಆಸ್ಪರಾಗಸ್, ಮೀಸೆ ಹೂ, ಮುಂತಾದ ಹೂಗಳು ಹಾಗೂ ಗೋಲ್ಡನ್ ಗ್ರಾಸ್, ಫರ್ನ್, ಸಿಪ್ರಸ್, ತಾಳೆ ಎಲೆಗಳನ್ನು ಬಳಸಿಕೊಂಡು ಸಮತಲ, ಲಂಬ, ತ್ರಿಕೋನ, ವೃತ್ತಾಕಾರ, ಬಲ ಕೋನೀಯ ತ್ರಿಕೋನಾಕಾರ, ಫ್ರೀಸ್ಟೈಲ್ ವಿನ್ಯಾಸಗಳಲ್ಲಿ ಹೂಗುಚ್ಛಗಳನ್ನು ತಯಾರಿಸಬಹುದು. ಹೂಗುಚ್ಛದ ಆರೈಕೆ ಹೇಗೆ? ಹೂಗುಚ್ಛದ ತಳಭಾಗವನ್ನು ಸ್ಪಾಂಜಿಗೆ ಸಿಕ್ಕಿಸಿ ಉಪ್ಪು ನೀರಿನಲ್ಲಿ ಅಥವಾ ಸಕ್ಕರೆ ನೀರಿನಲ್ಲಿ ಅದ್ದಿಟ್ಟರೆ ಹೂವುಗಳು ತಾಜಾ-ತಾಜಾವಾಗಿ ಇರುತ್ತದೆ. ದಿನಕ್ಕೆ ೩-೪ ಬಾರಿ ನೀರನ್ನು ಬದಲಿಸುತ್ತಿರಬೇಕು. ಹೂವಿನ ಮೆಲೆ ನೀರನ್ನು ಪ್ರೋಕ್ಷಿಸುತ್ತಿರಬೇಕು. ಹೂಗುಚ್ಛದ ಬುಡವನ್ನು ಕತ್ತರಿಸುತ್ತಿರಬೇಕು. ಪ್ರತಿದಿನವೂ ಅರ್ಧ ಆಸ್ಪರಿನ್ ಮಾತ್ರೆಯನ್ನು ಹಾಕಿದರೆ ದೀರ್ಘ ...