ನೋಡಬನ್ನಿ ಹೊರನಾಡನು
ENTRANCE |
ಮಲೆನಾಡಿನ ಮಂಜುಮುಸುಕಿರುವ, ಬೆಟ್ಟಗಳ ತಪ್ಪಲಿನಲ್ಲಿ ಹಿತವಾದ ಗಾಳಿಯನ್ನು ಬೀಸುವ ಕಾಫಿನಾಡು
ಚಿಕ್ಕಮಗಳೂರು. ಇಲ್ಲಿನ ಪರ್ವತಗಳ ಮಡಿಲಿನಲ್ಲಿ ಕಂಗೊಳಿಸುತ್ತಿರುವುದು ಶ್ರೀ ಕ್ಷೇತ್ರ ಹೊರನಾಡು.
ಚಿಕ್ಕಮಗಳೂರಿನಿಂದ ೧೦೦ ಕಿಮೀ ಅಂತರದಲ್ಲಿರುವ ಈ ಕ್ಷೇತ್ರದಲ್ಲಿ ನೆಲೆನಿಂತಿರುವವಳು ಶ್ರೀ
ಅನ್ನಪೂರ್ಣೇಶ್ವರಿ. ಹೆಸರು ಹೇಳಿದಾಕ್ಷಣ ಮನಸ್ಸಲ್ಲಿ ಮೂಡುವ ಭಾವನೆ ಸೊಬಗಿನ ಸಿರಿಯೆಂದು.
ಸಂಪೂರ್ಣ ಚಿನ್ನದಿಂದ ಕೂಡಿದ ಈ ದೇವಿಯನ್ನು ನೋಡಿದವರು ನಿಬ್ಬೆರಗಾಗುವುದರಲ್ಲಿ ಸಂಶಯವಿಲ್ಲ. ಆ
ದಿವ್ಯಸ್ವರೂಪ, ಮಂದಹಾಸವನ್ನು ನೋಡಲು ಎರಡೂ
ಕಣ್ಣುಗಳು ಸಾಲದು.
ಪ್ರಕೃತಿಯ ಸೊಬಗು
ದೇವಾಲಯಕ್ಕೆ ಪ್ರಯಾಣ ಬೆಳೆಸುವಾಗ ಘಟ್ಟಗಳ
ದಟ್ಟಕಾನನಸಿರಿ, ಸಸ್ಯವರ್ಗಗಳ ನಡುವೆ
ಮೆರವಣಿಗೆ ಹೋದಂತೆ ಭಾಸವಾಗುತ್ತದೆ. ಎಷ್ಟೇ ಮಳೆಯಿರಲಿ, ಚಳಿಯಿರಲಿ, ಯಾತ್ರಿಕರು
ಲೆಕ್ಕಿಸದೇ ದೇವಿಯ ದರ್ಶನ ಪಡೆಯಲು ಬರುತ್ತಾರೆ. ಮಲೆನಾಡ ಪರಿಸರವೆಂದರೆ ಹೇಳಬೇಕೆ... ಪ್ರಕೃತಿ
ತನ್ನೆಲ್ಲ ಸೊಬಗನ್ನು ಇಲ್ಲೇ ಧಾರೆ ಎರೆದಂತಿದೆ. ಪ್ರಯಾಣಕ್ಕೆ ಅಕ್ಟೋಬರ್-ಏಪ್ರಿಲ್ ಸೂಕ್ತಕಾಲ.
ಯಾತ್ರಿಕರು ಎಷ್ಟೋ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಬ್ಯಾಟರಿ ಲೋ ಆದದ್ದು ಉಂಟು. ಹೊರನಾಡು
ಪ್ರದೇಶವು ಭದ್ರಾನದಿದಂಡೆಯ ಮೇಲಿದೆ. ಈ ವಾತಾವರಣ ಗದ್ದಲಗಳಿಂದ ಕೂಡಿರುವುದಿಲ್ಲ. ಚಾರಣಕ್ಕೂ ಇದು
ಯೋಗ್ಯವಾದ ಸ್ಥಳವಾಗಿದೆ. ಜೈನಬಸದಿಗಳು ಕೂಡಕಾಣಸಿಗುತ್ತವೆ. ಭಕ್ತಾದಿಗಳಿಗೆ ವಿಶ್ರಾಂತಿಗೆ
ಯಾವುದೇ ತೊಂದರೆಗಳಿಲ್ಲ. ವಸತಿಗೃಹ, ಹೋಂ
ಸ್ಟೇಗಳು ಕ್ಷೇತ್ರದ ಸುತ್ತಲು ಆವರಿಸಿಕೊಂಡಿವೆ.
ಐತಿಹಾಸಿಕ ಮಹತ್ವ
ಪುರಾಣದ ಪ್ರಕಾರ ಪರಶಿವನು
ಶಾಪಗ್ರಸ್ಥನಾಗಿದ್ದಾಗ ಈ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆದುದ್ದರಿಂದ ಶಾಪದಿಂದ ಮುಕ್ತಿ
ಪಡೆದರು”
ಎಂದು ಉಲ್ಲೇಖವಾಗಿದೆ. ಈ ದೇವಾಲಯದ ಪ್ರತಿಷ್ಟಾಪನೆಯನ್ನು ಶತಮಾನಗಳ
ಹಿಂದೆ ಅಗಸ್ಥ್ಯ ಮಹರ್ಷಿಗಳು ಮಾಡಿದರು. ೪೦೦ ವರ್ಷಗಳಿಂದಲೂ ಧರ್ಮಕರ್ತರು ಆಡಳಿತ ನಡೆಸಿಕೊಂಡು
ಬಂದಿದ್ದಾರೆ. ೫ನೇಯ ಧರ್ಮಕರ್ತರು ಈ ದೇವಾಲಯದ ವಿಶಾಲತೆಯನ್ನು ವಿಸ್ತರಿಸಿದರು.
ಸಂಕಷ್ಟ ಹಾರಿಣಿ
ಇಲ್ಲಿನ ಪ್ರಥಮ
ಧರ್ಮಕರ್ತರಾದ ಶ್ರೀ ಶಂಕರ ನಾರಾಯಣ ಜೋಷಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಆಹಾರ ಮತ್ತು
ವಸತಿಯ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದ್ದರು. ಭಕ್ತರು ಎಂದಿಗೂ ಉಪವಾಸದಿಂದ
ಹಿಂತಿರುಗಿದ ದಿನವೇ ಇಲ್ಲ. ಬೇಡಿದ್ದನ್ನು ನೀಡುವ ಈ ದೇವಿ ಆದಿಶಕ್ತ್ಯಾತ್ಮಕ ಅನ್ನಪೂರ್ಣೆ ಎಂದು
ಕರೆಸಿಕೊಳ್ಳುತ್ತಾಳೆ. ಪ್ರಸ್ತುತ ೭ ನೇ ಧರ್ಮಕರ್ತರಾಗಿ ಶ್ರೀ ಭೀಮೇಶ್ವರ ಜೋಷಿ
ಕಾರ್ಯನಿರ್ವಹಿಸುತ್ತಿದ್ದಾರೆ.
ಭಕ್ತವತ್ಸಲೆ
ಘಟ್ಟದ ಸೆರಗನ್ನು
ಹೊದ್ದುಕೊಂಡಿರುವ ಈ ಸ್ಥಳವು ನಗರವಾಸಿಗಳಿಗೆ ಆಕರ್ಷಣೀಯವೇ ಸರಿ. ರಥೋತ್ಸವ ಹಾಗು ನವರಾತ್ರಿಯ
ಸಂಧರ್ಭಗಳಲ್ಲಿ ಜನಜಂಗುಳಿ ತುಂಬಿ ಹರಿದಿರುತ್ತದೆ. ರಜೆಯ ಅವಧಿಯಲ್ಲಿ ಯಾತ್ರಿಕರ ಸಂಖ್ಯೆ
ಹೆಚ್ಚಾಗಿರುತ್ತದೆ. ಇಲ್ಲಿನ ಸ್ಥಳೀಯ ಮಕ್ಕಳು ತಮ್ಮ ಊರುಗಳಲ್ಲಿ ಬೆಳೆಯುವ ವಿವಿಧ ಹಣ್ಣುಗಳನ್ನು
ಮಾರಿ ತಮ್ಮ ವಿಧ್ಯಾಭ್ಯಾಸಕ್ಕೆ ಸಾಕಗುವಷ್ಟು ಹಣ ಗಳಿಸುವಷ್ಟು ಕೌಶಲ್ಯ ಬೆಳೆಸಿಕೊಂಡಿರುವುದು
ವಿಶೇಷ.
ಪ್ರೇಕ್ಷಣೀಯ ತಾಣ
ಇಂತಹ ಕ್ಷೇತ್ರವು ಮೂಡಿಗೆರೆಯಲ್ಲಿರುವುದು ಇಲ್ಲಿನ
ಜನರಿಗೆ ಒಂದು ರೀತಿಯ ಹೆಮ್ಮೆ. ಈ ಅನ್ನದಾತೆ ಇರುವ ಈ ಪ್ರದೇಶವು ಸ್ವಚ್ಛತೆಯನ್ನು
ಕಾಪಾಡಿಕೊಂಡಿರುವುದರಲ್ಲಿ ಯಶಸ್ವಿಯಾಗಿದೆ. ಕವಿಗಳಿಗೆ ನಿಸರ್ಗ ಪ್ರೇಮಿಗಳಿಗೆ ಹೇಳಿಮಾಡಿಸಿದ
ತಾಣ. ಒಮ್ಮೆ ನೋಡಿಕೊಂಡು ಬಂದಮೇಲೆ ಮತ್ತೆ ಮತ್ತೆ ನೋಡಬೇಕು ಎಂಬ ಹಂಬಲ ಮನದಲ್ಲಿ ಮೂಡುತ್ತದೆ.
ಭಕ್ತರು ಒಲ್ಲದ ಮನಸ್ಸಿನಿಂದಲೇ ಹಿಂತಿರುಗುತ್ತಾರೆ. ಹಿಂದಿನಿಂದಲೂ ತನ್ನದೆ ಆದ ರಮ್ಯತೆಯನ್ನು
ಹೊಂದಿರುವ ಈ ಸ್ಥಳವನ್ನು ಒಮ್ಮೆಯಾದರು ನೋಡಿ ಕಣ್ಮನಗಳನ್ನು ತಣಿಸಿಕೊಳ್ಳಬೇಕು.
ಚಿತ್ರಕೃಪೆ-ವಿಕಿಪೀಡಿಯಾ
ಬರಹ-ಶಿಲ್ಪಶ್ರೀ ಹೆಚ್ ಪಿದ್ವಿತೀಯ ಪತ್ರಿಕೋದ್ಯಮ
ಎಸ್‌ಡಿಎಂ ಕಾಲೇಜು ಉಜಿರೆ
ದೂರವಾಣಿ- ೮೭೬೨೫೧೧೮೮೩
Comments
Post a Comment